ಮಂಜೇಶ್ವರ ಮಾ.2 ಮಂಗಳವಾರ : ಮಂಜೇಶ್ವರ ವಿವಿಧೆಡೆಗಳಲ್ಲಿ ಕೋಳಿ ಜ್ವರ ಹರಡುತ್ತಿರುವ ಬಗ್ಗೆ ತಿಳಿದುಬಂದಿದೆ. ಮಜಿಬೈಲ್ ಬಳಿ ಮನೆಯೊಂದರಲ್ಲಿ ಸಾಕುತ್ತಿರುವ 8 ರಷ್ಟು ಕೋಳಿಗಳಿಗೆ ಜ್ವರ ಬಾಧಿಸಿದ ಬಗ್ಗೆ ತಿಳಿದು ಬಂದಿದೆ. ಕೋಳಿಗಳನ್ನು ಚಿಕಿತ್ಸೆಗೊಳಪಡಿಸಿದ್ದು ಜ್ವರ ಇದ್ದ ಬಗ್ಗೆ ಖಚಿತಪಡಿಸಲಾಗಿದೆ. ಮನೆಯಲ್ಲಿ ಸಾಕುತ್ತಿದ್ದ ಕೋಳಿಯೊಂದಿಗೆ ಕರ್ನಾಟಕದಿಂದ ತಂದ ಕೋಳಿಯನ್ನು ಒಟ್ಟಿಗೆ ಹಾಕಲಾಗಿತ್ತು. ಇದರಿಂದ ಜ್ವರ ಹರಡಿರುವುದಾಗಿ ಡಾಕ್ಟರ್ ಧೃಢೀಕರಿಸಿದ್ದಾರೆ. ಗಡಿ ದಾಟಿ ಕೇರಳಕ್ಕೆ ತರುವ ಪ್ರಾಣಿಗಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸುವ ದೊಡ್ಡ ರೋಗ ನಿವಾರಣಾ ಚೆಕ್‌ಪೋಸ್ಟ ಒಂದು ತಲಪಾಡಿಯಲ್ಲಿ ಕಾರ್ಯಾಚರಿಸುತ್ತಿದ್ದರೂ ಯಾವುದೇ ತಪಾಸಣೆ ನಡೆಸುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ.
ಕರ್ನಾಟಕದಿಂದ ಕೇರಳಕ್ಕೆ ಕೆದುಂಬಾಡಿ ದಾರಿಯಾಗಿ ತೆರಿಗೆ ವಂಚಿಸಿ ವ್ಯಾಪಕವಾಗಿ ಕೋಳಿ ಸಾಗಾಟ ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕೃತರು ಯಾವುದೇ ಕ್ರಮ ಕೈಗೊಳ್ಲುತ್ತಿಲ್ಲವೆಂಬ ಆರೋಪ ಕೂಡಾ ಕೇಳಿ ಬರುತ್ತಿದೆ. ದಿನಂಪ್ರತಿ ಈ ದಾರಿಯಾಗಿ ಟೆಂಪೋ,ಲಾರಿಗಳಲ್ಲಿ ಸಾಗಿಸುವ ಕೋಳಿಗಳನ್ನು ಜಿಲ್ಲೆಯ ವಿವಿಧೆಡೆಗಳಲ್ಲಿ ಮಾರಲಾಗುತ್ತಿದೆ. ಕೋಳಿ ಜ್ಬರ ಹರಡುತ್ತಿರುವ ಬಗ್ಗೆ ಜನ ಸಾಮಾನ್ಯರಲ್ಲಿ ಆತಂಕ ಮೂಡುತ್ತಿದ್ದು ಈ ಬಗ್ಗೆ ಸಂಬಂಧಪಟ್ಟ ಇಲಾಖೆ ತಕ್ಷಣ ಕ್ರಮ ಕೈಗೊಳ್ಲಬೇಕೆಂದು ಜನ ಸಾಮಾನ್ಯರು ಹೇಳುತ್ತಿದ್ದಾರೆ.
-ಆರಿಫ್ ಮಚ್ಚಂಪಾಡಿ,ಮಂಜೇಶ್ವರ